ನರಸಿಂಹವರ್ಮ
	ದಕ್ಷಿಣ ಭಾರತದಲ್ಲಿ ಕಂಚಿಯಿಂದ ಆಳುತ್ತಿದ್ದ ಈ ಹೆಸರಿನ ಪಲ್ಲವ ದೊರೆಗಳು ಇಬ್ಬರು. 1ನೆಯ ನರಸಿಂಹವರ್ಮ 630-668ರಲ್ಲಿ ಆಳ್ವಿಕೆ ನಡೆಸಿದ. ಈತ 1ನೆಯ ಮಹೇಂದ್ರವರ್ಮನ ಮಗ. ಮಹಾಮಲ್ಲ ಅಥವಾ ಮಾಮಲ್ಲನೆಂದು ಇವನು ಪ್ರಸಿದ್ಧನಾಗಿದ್ದಾನೆ. ತನ್ನ ರಾಜ್ಯದ ಮೇಲೆ ದಂಡೆತ್ತಿ ಬಂದ ಚಾಳುಕ್ಯ ಚಕ್ರವರ್ತಿ 2ನೆಯ ಪುಲಕೇಶಿಯನ್ನು ಇವನು ಪರಾಜಯಗೊಳಿಸಿದ. ಇವನು ಚಾಳುಕ್ಯ ರಾಜಧಾನಿ ಬಾದಾಮಿಯನ್ನು ಆಕ್ರಮಿಸಿಕೊಂಡು ತನ್ನ ರಾಜ್ಯಕ್ಕೆ ಸೇರಿಸಿಕೊಂಡು ವಾತಾಪಿಕೊಂಡ ಎಂಬ ಬಿರುದು ಧರಿಸಿಕೊಂಡ. ಪುಲಕೇಶಿಯ ಅನಂತರ ಅವನ ಮಗ ವಿಕ್ರಮಾದಿತ್ಯ ತಂದೆಯ ರಾಜ್ಯವನ್ನು ಸಂಘಟಿಸಿ, ಕೆಲವು ವರ್ಷಗಳ ಮೇಲೆ ಬಾದಾಮಿಯನ್ನು ಮತ್ತೆ ಗೆದ್ದುಕೊಂಡ.

	ನರಸಿಂಹವರ್ಮ ಚಾಳುಕ್ಯ ಚಕ್ರಾಧಿಪತ್ಯದ ಮೇಲಣ ದಂಡಯಾತ್ರೆ ಮುಗಿಸಿ ಸುಮಾರು 642ರಲ್ಲಿ ತನ್ನ ರಾಜಧಾನಿಗೆ ಹಿಂದಿರುಗಿದ. ಅನಂತರ ತನ್ನ ಆಶ್ರಯ ಬಯಸಿ ಬಂದ ಸಿಂಹಳದ ಮಾನವರ್ಮನಿಗೆ ಅವನು ಕಳೆದುಕೊಂಡಿದ್ದ ಸಿಂಹಾಸನವನ್ನು ದೊರಕಿಸಿಕೊಡಲು ಅಲ್ಲಿಗೆ ಎರಡು ಬಾರಿ ನೌಕಾಪಡೆ ಕಳುಹಿಸಿಕೊಟ್ಟ. ಮಾನವರ್ಮ ತನ್ನ ಶತ್ರುವನ್ನು ಕೊಂದು ಅನುರಾಧಪುರವನ್ನು ವಶಪಡಿಸಿಕೊಂಡ. 

	ನರಸಿಂಹವರ್ಮನ ಕಾಲದಲ್ಲಿ ಪಲ್ಲವ ಚಕ್ರಾಧಿಪತ್ಯ ಅತ್ಯಂತ ಪ್ರಬಲವಾಯಿತು. ಇವನು ಅನೇಕ ನಿರ್ಮಾಣ ಕಾರ್ಯಗಳನ್ನು ಕೈಗೊಂಡ. ತನ್ನ ಚಕ್ರಾಧಿಪತ್ಯದ ಮಾಮಲ್ಲಿಪುರಂ ಬಂದರನ್ನು ಬಹಳ ಅಭಿವೃದ್ಧಿಪಡಿಸಿದ. ಇವನು ಆಳುತ್ತಿದ್ದಾಗ ಚೀನೀ ಪ್ರವಾಸಿ ಹ್ಯೂಯೆನ್ ತ್ಸಾಂಗ್ ಇವನ ಚಕ್ರಾಧಿಪತ್ಯಕ್ಕೆ ಭೇಟಿನೀಡಿದ್ದ. ಜನರು ಧೈರ್ಯಶಾಲಿಗಳೂ, ಸತ್ಯಪ್ರಿಯರು ಹಾಗೂ ಜ್ಞಾನದಾಹಿಗಳು ಎಂದು ಆತ ಬಣ್ಣಿಸಿದ್ದಾನೆ.

	ನರಸಿಂಹವರ್ಮ ಮಹಾಬಲಿಪುರದಲ್ಲಿ ಕಲ್ಲುಗಳನ್ನು ಕಡೆಯಿಸಿ ದೇಗುಲಗಳನ್ನು ನಿರ್ಮಿಸಿದ. ಇದಕ್ಕೆ ಬಾದಾಮಿಯ ವಾಸ್ತುಶಿಲ್ಪದಿಂದ ಇವನು ಸ್ಫೂರ್ತಿ ಪಡೆದ. ಒಂದನೆಯ ನರಸಿಂಹವರ್ಮ ಸುಮಾರು 668ರಲ್ಲಿ ಕಾಲವಾದ.

	2ನೆಯ ನರಸಿಂಹವರ್ಮ 680-720ರಲ್ಲಿ ಆಳುತ್ತಿದ್ದ. ಇವನು 2ನೆಯ ಪರಮೇಶ್ವರವರ್ಮನ ಮಗ. ಇವನ ದೀರ್ಘ ಆಡಳಿತ ಶಾಂತಿಯುತವಾಗಿತ್ತು. ಕಾಂಚೀಪುರದಲ್ಲೂ ಮಹಾಬಲಿಪುರದಲ್ಲೂ ಇವನು ದೇವಾಲಯಗಳನ್ನು ಕಟ್ಟಿಸಿದ. ಇವನು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ. ಸಂಸ್ಕøತದ ಸುಪ್ರಸಿದ್ಧ ಆಲಂಕಾರಿಕ ದಂಡಿನ್ ಹಲವು ವರ್ಷಗಳ ಕಾಲ ಇವನ ಆಸ್ಥಾನದಲ್ಲಿದ್ದ. 2ನೆಯ ನರಸಿಂಹವರ್ಮ ಚೀನಾಕ್ಕೆ ರಾಯಭಾರಿಗಳನ್ನು ಕಳುಹಿಸಿದ್ದ. ಆ ದೇಶದೊಂದಿಗೆ ವ್ಯಾಪಾರ ಬೆಳೆಯಿತು.
(ಎಂ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ